HOME<>ABOUT<>PROCESS<>PRODUCTS<>CHARAKA UTSAVA<>DASSIMAYYA AWARD<>OUTLETS<>CONTACTimageKANNADA<>ENGLISH
The Beginning
Location
How it works
Future plans
Dying
Weaving
Block Printing
Embroidery
Dress Making
The Beginning
Future plans
ಚರಕ ಸಂಸ್ಥೆಯ ಸ್ಪಷ್ಟೀಕರಣ
ನೇಕಾರರ ವಸತಿ ಯೋಜನೆ: ಫಲಾನುಭವಿಗಳಿಗೆ ಅನ್ಯಾಯವಾಗಿಲ್ಲ
01-01-21


2009-10ನೇ ಸಾಲಿನಲ್ಲಿ ಚರಕ ಸಂಸ್ಥೆಗೆ ಮಂಜೂರಾಗಿದ್ದ ನೇಕಾರರ ವಸತಿ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಅರ್ಥ ಬರುವ ರೀತಿಯಲ್ಲಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡುತ್ತಿದ್ದಾರೆ. ಅದೂ, ಯೋಜನೆ ಮಂಜೂರಾದ 10 ವರ್ಷಗಳ ನಂತರ. ಇದಕ್ಕೆ ಚರಕಸಂಸ್ಥೆ ಈ ಕೆಳಕಂಡಂತೆ ವಿವರವಾದ ಸ್ಪಷ್ಟೀಕರಣ ನೀಡಲು ಬಯಸುತ್ತದೆ.



ಚರಕ ಸಂಸ್ಥೆಗೆ 2009-10ನೇ ಸಾಲಿನಲ್ಲಿ, ರಾಜ್ಯ ಸರ್ಕಾರದಿಂದ, ನೇಕಾರರಿಗೆ ಸೂರು ಕಲ್ಪಿಸುವ ವಸತಿ ಯೋಜನೆ ಮಂಜೂರಾಗಿತ್ತು. ಯೋಜನೆಯಡಿ 38 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಈ ಯೋಜನೆಯ ಪ್ರಕಾರ ಪ್ರತಿ ಫಲಾನುಭವಿಗೆ ಸರ್ಕಾರದಿಂದ ತಲಾ ರೂ 60 ಸಾವಿರ ಮಂಜೂರಾಗಿತ್ತು.



ಈ ಪೈಕಿ ತಲಾ 40 ಸಾವಿರ ಸಹಾಯಧನ ಹಾಗೂ ತಲಾ ರೂ 20 ಸಾವಿರ ಸಾಲದ ರೂಪದಲ್ಲಿ ನೀಡುವುದು ಯೋಜನೆಯಲ್ಲಿ ನಿಗದಿಯಾದ ಅಂಶವಾಗಿದೆ. ಈ ಪ್ರಕಾರ ಚರಕದಿಂದ ಆಯ್ಕೆಯಾದ ಎಲ್ಲಾ 38 ಫಲಾನುಭವಿಗಳಿಗೂ ತಲಾ 60 ಸಾವಿರ ರೂಪಾಯಿ ಬ್ಯಾಂಕ್ ಖಾತೆಯ ಮೂಲಕ ಸಂದಾಯವಾಗಿದೆ. ಈ ಬಗ್ಗೆ ದಾಖಲಾತಿಗಳು ಚರಕ ಸಂಸ್ಥೆಯ ಬಳಿ ಇದೆ.



ಆರೋಪ ಮಾಡಿರುವ ಸದರಿ ಲೇಖನದಲ್ಲಿ ಸತೀಶ್ ಬಿನ್ ರಾಮಪ್ಪ ಎಂಬುವವರಿಗೆ ಕೇವಲ ರೂ 40 ಸಾವಿರ ಪಾವತಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸತೀಶ್ ಅವರಿಗೆ ಯೋಜನೆಯಂತೆ ರೂ 60 ಸಾವಿರ ಪಾವತಿಯಾಗಿರುವ ದಾಖಲೆ ಸಂಸ್ಥೆಯ ಬಳಿ ಇದೆ. ಸತೀಶ್ ಅವರ ಬಳಿ ಸಂಸ್ಥೆಯ ಪ್ರಮುಖರು ವಿಚಾರಿಸಿದಾಗ ‘ನನಗೆ ಕೇವಲ 40 ಸಾವಿರ ಪಾವತಿಯಾಗಿದೆ ಎಂದು ಯಾವುದೇ ಪತ್ರಕರ್ತರಿಗೆ ಹೇಳಿಲ್ಲ. ನನ್ನ ಮಾತನ್ನು ತಿರುಚಲಾಗಿದೆ’ ಎಂದಿದ್ದಾರೆ.

ಫಲಾನುಭವಿಗಳಿಗೆ ನಿವೇಶನಗಳ ಸ್ವಾಧೀನಪತ್ರ ಮಾತ್ರ ನೀಡಿದಿರಿ, ಹಕ್ಕುಪತ್ರ ನೀಡದೆ ನಿವೇಶನಗಳನ್ನು ನುಂಗಿಹಾಕಿದಿರಿ ಎಂದು ಆರೋಪಿಸಲಾಗಿದೆ. ಇದು ಸುಳ್ಳು ಆರೋಪ. ಸಾರ್ವಜನಿಕ ಕೆಲಸಗಳಿಗಾಗಿ ಖರೀದಿಸಿದ ಕೃಷಿ ಭೂಮಿಯ ಹಕ್ಕುಪತ್ರವನ್ನು ವೈಯಕ್ತಿಕ ಹೆಸರಿಗೆ ನೀಡಲಿಕ್ಕೆ ಕಾನೂನಿನಡಿಯಲ್ಲಿ (ಕೃಷಿ ಜಮೀನಿನ ಏಲಿಯನೇಷನ್ ನಿಯಮ) ಬರುವುದಿಲ್ಲ. ಅದು ನಮ್ಮ ಉದ್ದೇಶವೂ ಆಗಿರಲಿಲ್ಲ.

ನಿಜ ಸಂಗತಿಯೆಂದರೆ, ನೇಕಾರರ ವಸತಿ ಯೋಜನೆ ಅಸಮರ್ಪಕವಾಗಿ ವಿನ್ಯಾಸಗೊಳಿಸಲಾದ ಯೋಜನೆಯಾಗಿತ್ತು. ಯೋಜನೆಯಲ್ಲಿ ಮಹಿಳೆಯರು ಫಲಾನುಭವಿಗಳಾಗಲಿಕ್ಕೆ ಸಾಧ್ಯವಿರಲಿಲ್ಲ. ಏಕೆಂದರೆ ಹೆಚ್ಚಿನ ಹೆಂಗಸರಿಗೆ ಆಸ್ತಿಯ ಹಕ್ಕಿರುವುದಿಲ್ಲ. ನಮ್ಮದು ಮಹಿಳೆಯರ ಸಂಘ. ಈ ಸಂಗತಿಯನ್ನು ಅಧಿಕಾರಿಗಳ ಗಮನಕ್ಕೆ ತಂದು ಪ್ರತಿಭಟಿಸಿದಾಗ, ಗೃಹ ನಿರ್ಮಾಣ ಸಂಘ ಮಾಡಿಕೊಳ್ಳಿರಿ, ಸಂಘದ ಮೂಲಕ ಫಲಾನುಭವಿಗಳಿಗೆ ನಿವೇಶನದ ಸ್ವಾಧೀನಪತ್ರ ( Possession certificate) ನೀಡಿರಿ, ಯೋಜನೆಯನ್ನು ಮಂಜೂರು ಮಾಡುತ್ತೇವೆÉ ಎಂದರು. ಜಾಗ ಖರೀದಿ ಮಾಡಿದೆವು. ಸ್ವಾಧೀನಪತ್ರ ನೀಡಿದೆವು. ಯೋಜನೆ ಮಂಜೂರಾಯಿತು. ಕಟ್ಟಡದ ಕೆಲಸವೂ ಶುರುವಾಯಿತು. ಕಟ್ಟಡದ ಕೆಲಸಕ್ಕೆ ಸಂಸ್ಥೆಯೇ ಹಣ ತೊಡಗಿಸಿತು. ಒಳ್ಳೆಯ ಉದ್ದೇಶದಿಂದಲೇ ತೊಡಗಿಸಿತು. ಆದರೆ ಅಧಿಕಾರಿಗಳು ನಮ್ಮನ್ನು ನಡುನೀರಿನಲ್ಲಿ ಕೈ ಬಿಟ್ಟರು. ಸರಕಾರದ ಹಣವನ್ನು ಸಂಘಕ್ಕೆ ನೀಡದೇ, ಸಂಘದ ಮೂಲಕ ಫಲಾನುಭವಿಗಳಿಗೆ ಚೆಕ್ಕುಗಳನ್ನು ನೇರವಾಗಿ ಬಿಡುಗಡೆ ಮಾಡಿಸಿದರು. ಗೃಹ ನಿರ್ಮಾಣ ಸಂಘಕ್ಕೆ ಮಾಡಿರಿ ಎಂದು ವಿನಂತಿಸಿಕೊಂಡಾಗ, ಹಾಗೆ ಮಾಡಲು ಬರುವುದಿಲ್ಲ ಎಂದರು. ಅರ್ಧ ಕಟ್ಟಿದ್ದ ಕಟ್ಟಡಗಳ ಮುಂದೆ ಫಲಾನುಭವಿಗಳನ್ನು ನಿಲ್ಲಿಸಿ ಫೋಟೊ ತೆಗೆಸಿ, ತಮ್ಮ ದಾಖಲೆಯಲ್ಲಿ ಸೇರಿಸಿ, ಯೋಜನೆ ಸಮಪರ್ಕವಾಗಿ ಕೈಗೂಡಿದೆ ಎಂದು ತಮ್ಮ ಕಡತದಲ್ಲಿ ಷರಾ ಬರೆದು ಕೈ ತೊಳೆದುಕೊಂಡರು.

 

 
ಕಟ್ಟಡ ನಿರ್ಮಾಣಕ್ಕಾಗಿ ನಾವು ಖರ್ಚುಮಾಡಿದ ಹಣ ನಮ್ಮ ತಲೆಯ ಮೇಲೆ ಬಂತು. ಫಲಾನುಭವಿಗಳೂ ಅತಂತ್ರರಾದರು ನಾವೂ ಅತಂತ್ರರಾದೆವು. ಬೇರೆದಾರಿ ಕಾಣದೆ, ಫಲಾನುಭವಿಗಳಿಗಾಗಿ ಸರಕಾರದಿಂದ ನೇರವಾಗಿ ಅವರ ಹೆಸರಿಗೇ (ಚೆಕ್ಕಿನ ರೂಪದಲ್ಲಿ) ಬಂದಿದ್ದ ಹಾಗೂ ಠೇವಣಿಯಾಗಿ ಅವರದ್ದೇ ಹೆಸರಿನಲ್ಲಿ ಇರಿಸಲಾಗಿದ್ದ ಠೇವಣಿ ಪತ್ರಗಳನ್ನು ( fixed deposit certificates ) ಫಲಾನುಭವಿಗಳಿಗೆ ಹಿಂದಿರುಗಿಸಿ ಅವರ ಅತಂತ್ರತೆಯನ್ನು ನೀಗಿಸಿದೆವು. ನೇಕಾರ ವಸತಿ ಯೋಜನೆಯ ನಿಜವಾದ ಕತೆಯಿದು.



ರಾಜ್ಯಸರಕಾರದಿಂದ ಆ ನಂತರದಲ್ಲಿ ಮಂಜೂರಾಗಿರುವ ಸರಿಸುಮಾರು ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಎಲ್ಲ ಅನುದಾನಗಳ ಕತೆಯೂ ಇದೇ ಆಗಿದೆ. ಒಂದೇ ಒಂದು ಪೈಸೆ ಅನುದಾನವೂ ಈವರೆಗೆ ಸಂಸ್ಥೆಯನ್ನು ತಲುಪಿರುವಿದಿಲ್ಲ. ಎರಡು ತಿಂಗಳ ಹಿಂದೆ ಚರಕದ ಹೆಣ್ಣುಮಕ್ಕಳು ಹೋರಾಟಮಾಡಿದಾಗ, ಹೋರಾಟಕ್ಕೆ ಮಣಿದು, ಮಾನ್ಯ ಕೈಮಗ್ಗ ಜವಳಿ ಆಯುಕ್ತರು ಖುದ್ದಾಗಿ ಬಂದು, ಸಾರ್ವಜನಿಕವಾಗಿ ಅವರು ನೀಡಿದ ಚೆಕ್ ಕೂಡಾ ಸುಳ್ಳೇ ಆಗಿತ್ತು. ವೇದಿಕೆಯ ಮೇಲಿನಿಂದ ಸಾಹೇಬರು ಚೆಕ್ ನೀಡುತ್ತಿರುವಾಗಲೇ ಅವರೊಟ್ಟಿಗೆ ಬಂದಿದ್ದ ಗುಮಾಸ್ತರು, ನಮ್ಮ ಕಿವಿಯಲ್ಲಿ ಪಿಸುಗುಟ್ಟಿ, ಚೆಕ್ಕನ್ನು ಜಮಾ ಮಾಡಬೇಡಿರಿ, ನಿಮಗೆ ಬರಬೇಕಾದ ಅನುದಾನದ ಹಣವು ಮುಂದೆ ಬರಲಿದೆ ಎಂದು ಹೇಳಿಹೋದರು. ಈಗ ಕೋವಿಡ್ ಕಾರಣ ಹೇಳಿ, ಯಾವುದೇ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎನ್ನುತ್ತಿದ್ದಾರೆ.

ನಮ್ಮ ತೇಜೋವಧೆ ನಡೆಸಿರುವ ಹಾಗೂ ವಿಚಾರವಾದಿ ಪತ್ರಕರ್ತರು ಎಂದು ಹೇಳಿಕೊಳ್ಳುತ್ತಿರುವ ಮಂದಿ ನಿಜಕ್ಕೂ ತೇಜೋವಧೆ ಮಾಡಬೇಕಾದದ್ದು ಬಡವರ ಸಂಸ್ಥೆಗಳನ್ನಲ್ಲ, ಅಥವಾ ನಮ್ಮ ಮಾರ್ಗದರ್ಶಕರಾದ ಪ್ರಸನ್ನ ಅವರನ್ನೂ ಅಲ್ಲ, ಅಥವಾ ನಮ್ಮ ಸೋದರ ಸಂಸ್ಥೆಯಾದ ದೇಸಿಯನ್ನೂ ಅಲ್ಲ. ಭ್ರಷ್ಟ ಹಾಗೂ ಅಧಕ್ಷ ಸರಕಾರಗಳ ತೇಜೋವಧೆ ಮಾಡಬೇಕಿದೆ ಅವರು.



ನಮ್ಮ ಸಂಸ್ಥೆಯ ಭಾಗವಾಗಿರುವ, ಏಳು ಜಿಲ್ಲೆಗಳ ನಾಲ್ಕು ನೂರಾ ಐವತ್ತು ನೇಕಾರರು ಈಗಲೂ ಕೆಲಸವಿಲ್ಲದೆ ಹಸಿದು ಕುಳಿತಿದ್ದಾರೆ. ಇತ್ತ ನಾವು - ಮಾತೃಸಂಸ್ಥೆಯ ಸದಸ್ಯರು, ಈಗಲೂ ಮಣ್ಣು ಹೊತ್ತು ಚರಕವನ್ನು ಉಳಿಸಲು ಹೆಣಗುತ್ತಿದ್ದೇವೆ. ಮಾನ್ಯ ಪತ್ರಕರ್ತರು ಚರಕದ ಆವರಣಕ್ಕೆ ಭೇಟಿಕೊಟ್ಟಿದ್ದಾಗ, ಅಲ್ಲಿ, ಮಣ್ಣು ಗಾರೆ ಇತ್ಯಾದಿ ಕೆಲಸ ಮಾಡುತ್ತಿದ್ದವರು ನಾವೇ ಸರಿ. ಪತ್ರಕರ್ತರು ನಮ್ಮನ್ನು ಮಾತನಾಡಿಸಲಿಲ್ಲ, ಕಣ್ಣೆತ್ತಿ ನಮ್ಮ ಕಡೆನೋಡಲು ಇಲ್ಲ. ತಾವು ಏನನ್ನು ಬರೆಯಬೇಕೆಂದು ಅಂದು ಕೊಂಡಿದ್ದರೋ ಅದನ್ನೆ ಬರೆದಿದ್ದಾರೆ.


ವಂದನೆಗಳೊಂದಿಗೆ
ತಮ್ಮ ವಿಶ್ವಾಸಿಗಳು,

ಗೌರಮ್ಮ
ಅಧ್ಯಕ್ಷರು
ಮತ್ತು ಸದಸ್ಯರು
ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ
ಭೀಮನಕೋಣೆ, ಸಾಗರ(ತಾ)
ಶಿವಮೊಗ್ಗ(ಜಿ)