ಜೀವನ್ಮುಖಿ ಸಾಗರ ಹಾಗೂ ಚರಕ ಜಂಟಿಯಾಗಿ ಸಾಗರದ ಗಾಂಧಿ ಮೈದಾನದಲ್ಲಿ ಆಗಸ್ಟ್ 24 ರಂದು ಶನಿವಾರ ‘ಅವ್ವ ಮಹಾಸಂತೆ’ಯನ್ನು ಹಮ್ಮಿಕೊಳ್ಳಲಾಗಿತ್ತು.
‘ಸಂತೆ’ಗೆ ಬೆಂಗಳೂರು ‘ಇಕ್ರಾ’ ಸಂಸ್ಥೆಯ ವಿ. ಗಾಯತ್ರಿ ಚಾಲನೆ ನೀಡಿದರು. ಪೌರಾಯುಕ್ತ ಎಚ್.ಕೆ. ನಾಗಪ್ಪ ಅತಿಥಿಗಳಾಗಿ ಭಾಗವಹಿಸಿದ್ದರು. ಜೀವನ್ಮುಖಿಯ ಎಂ.ವಿ. ಪ್ರತಿಭಾ, ಚೂಡಾಮಣಿ, ಚರಕದ ಮಹಾಲಕ್ಷ್ಮಿ, ಪದ್ಮಶ್ರೀ ಅವರೂ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಕಲಿಕಾರ್ಥಿಗಳ ತಂಡದಿಂದ ಜಾನಪದ ಗೀತಗಾಯನ ಹಾಗೂ ಜೇಡಿಕುಣಿ ಮಂಜುನಾಥ ಅವರ ನಿರ್ದೇಶನದಲ್ಲಿ ಜೀವನ್ಮುಖಿ ತಂಡದಿಂದ ಚೌಡಿಕೆ ಕುಣಿತ ಆಯೋಜಿಸಲಾಗಿತ್ತು.
ಸಂತೆಯಲ್ಲಿ ರಾಜ್ಯದ ಧಾರವಾಡ, ಶಿವಮೊಗ್ಗ, ಶಿಕಾರಿಪುರ, ಮಂಗಳೂರು, ಶಿರಸಿ ಇನ್ನಿತರ ಭಾಗಗಳಿಂದ ಮಹಿಳಾ ಉದ್ಯಮಿಗಳು ಪಾಲ್ಗೊಂಡಿದ್ದರು. ಪ್ರಮುಖವಾಗಿ ದೇಸಿ ತಿನಿಸು, ಅಡಿಕೆ ಉಪ್ಪಿನಕಾಯಿ, ಸಿರಿಧಾನ್ಯ ಉತ್ಪನ್ನ, ಅಲಂಕಾರಿಕ ವಸ್ತು, ಬಾಳೆನಾರಿನ ಉತ್ಪನ್ನ, ಚರಕದ ಉತ್ಪನ್ನಗಳು, ಮಲೆನಾಡಿನ ವಿಶೇಷ ವಿವಿಧ ಖಾದ್ಯಗಳು, ತಿಂಡಿ- ತಿನಿಸುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು.