ಪ್ರತಿವರ್ಷದಂತೆ ಈ ವರ್ಷವೂ, 2023 ಮಾರ್ಚ್ 4 ಮತ್ತು 5 ರಂದು, ಶನಿವಾರ ಹಾಗೂ ಭಾನುವಾರ, ಚರಕ ಉತ್ಸವವನ್ನು ಆಯೋಜಿಸಲಾಗಿತ್ತು ಈ ಉತ್ಸವದ ಅಂಗವಾಗಿ “ಗ್ರಾಮೀಣ ಉದ್ದಿಮೆಗಳಲ್ಲಿ ಗುಣಮಟ್ಟ ನಿರ್ವಹಣೆ ಹೇಗೆ?” ಹಾಗೂ ಸಂಗೀತ, ನಾಟಕ, ಯಕ್ಷಗಾನ ಕೋಲಾಟ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆಡಸಲಾಯಿತು.
ಮಾರ್ಚ್ 4, ಶನಿವಾರ ಸಂಜೆ 6-30 ಕ್ಕೆ ಚರಕದ ಶ್ರಮಜೀವಿ ಆಶ್ರಮ, ಹೊನ್ನೇಸರ ಆವರಣದಲ್ಲಿ ಉತ್ಸವದ ಉದ್ಘಾಟನೆಯನ್ನು ಡಾ|| ರಾಜನಂದಿನಿ ಕಾಗೋಡು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳು ಸಾಗರ ವಿಧಾನಸಭಾ ಕ್ಷೇತ್ರ ಇವರು ನೆಡಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಶ್ರೀಯುತ ಉಮೇಶ್ ಎಚ್ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಹಾಗೂ ಶ್ರೀಮತಿ ಲಲಿತಾ ಮಂಜುನಾಥ್ ಅಧ್ಯಕ್ಷರು ಗ್ರಾಮ ಪಂಚಾಯಿತಿ, ಹೆಗ್ಗೋಡು ಇವರು ಭಾಗವಹಿಸಿದರು. ಚರಕ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಗೌರಮ್ಮನವರು ಅಧ್ಯಕ್ಷತೆ ವಹಿಸಿದ್ದರು.
ಸಂಜೆ 7.30ಕ್ಕೆ ಚರಕ ಬಳಗದವರಿಂದ ಶ್ರೀಮತಿ ಪ್ರತಿಭಾ ಎಂ.ವಿ.ರವರ ನಿರ್ದೇಶನದಲ್ಲಿ ಮಹಾಕವಿ ಕುವೆಂಪುರವರ ಸಣ್ಣಕಥೆ ಆಧಾರಿತ ಬಿ. ಚಂದ್ರೇಗೌಡರ ರಂಗಪ್ರಯೋಗ ಧನ್ವಂತರಿ ಚಿಕಿತ್ಸೆ ನಾಟಕ ಪ್ರದರ್ಶನ ನೆರವೇರಿತು.
ಮಾರ್ಚ್ 5, ಭಾನುವಾರ, ಬೆಳಗ್ಗೆ 10ಕ್ಕೆ ಹೊನ್ನೇಸರದ ಶ್ರಮಜೀವಿ ಆಶ್ರಮದಲ್ಲಿ “ಗ್ರಾಮೀಣ ಉದ್ದಿಮೆಗಳಲ್ಲಿ ಗುಣಮಟ್ಟ ನಿರ್ವಹಣೆ ಹೇಗೆ?” ಪುಸ್ತಕ ಬಿಡುಗಡೆ ಹಾಗೂ ವಿಚಾರ ಮಂಥನ ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಕೃಷ್ಣ ಪ್ರಸಾದ್ ಮೈಸೂರು, ಶ್ರೀಮತಿ ಅರಣಾ ಎ ಪ್ರಾಂಶುಪಾಲರು, ಸಾಗರ ಪ್ರಾಂತ್ಯದ ಹೆಸರಾಂತ ಉದ್ದಿಮೆದಾರರು ಮತ್ತು ವಿವಿಧ ಜಿಲ್ಲೆಯ ನೇಕಾರರುಗಳು ಸಾಹಿತಿಗಳು ಹಾಗೂ ಬರಹಗಾರರು ಕಾರ್ಯಕರ್ತರುಗಳೂ ಭಾಗವಹಿಸಿದರು.
ಸಂಜೆ 6.30ಕ್ಕೆ ಶ್ರಮಜೀವಿ ಆಶ್ರಮ ಹೊನ್ನೇಸರದ ಆವರಣದಲ್ಲಿ ಕಾಯಕ ಪ್ರಶಸ್ತಿ ವಿತರಣೆ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮ ನೆರವೇರಿತು.
ಸಂಜೆ 7.30ಕ್ಕೆ ಗಾನ ಸಾರಥಿ ಜನ್ಸಾಲೆಯವರ ಸಾರಥ್ಯದಲ್ಲಿ ಶ್ರೀ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕೃಷ್ಣಾರ್ಜುನರ ಕಾಳಗ ಎಂಬ ಯಕ್ಷಗಾನ ಪ್ರಸಂಗವನ್ನು ಏರ್ಪಡಿಸಲಾಗಿದೆ. ಹಿಮ್ಮೇಳದಲ್ಲಿ ಗಾನ ಸಾರಥಿ ಜನ್ಸಾಲೆಯವರ ಸಾರಥ್ಯ ಹಾಗೂ ಮುಮ್ಮೇಳದಲ್ಲಿ ಶ್ರೀ ತೋಟಿಮನೆ ಗಣಪತಿ ಹೆಗಡೆ, ಕಡಬಾಳು ಉದಯ ಹೆಗಡೆ, ವಿನಯ್ ಭಟ್, ನಿತಿನ್ ಕುಮಾರ್ ಶೆಟ್ಟಿ, ವಿಜಯ ಗಾಣಿಗ. ಚಪ್ಪರ ಮನೆ ಶ್ರೀಧರ ಹೆಗಡೆ ಹಾಗೂ ಇತರರು ಇದ್ದರು.